
ಬಹಿಷ್ಕಾರದ ಎಚ್ಚರಿಕೆ..! ಹಿಂದೂ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಪದ ಬಳಕೆ ಕೈಬಿಡದಿದಲ್ಲಿ ಜಾತಿ ಜನಗಣತಿ ಬಹಿಷ್ಕಾರ - ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಸಭೆಯಲ್ಲಿ ಸರಕಾರಕ್ಕೆ ಎಚ್ಚರ
Sunday, September 21, 2025
Edit
ಮಂಗಳೂರು: ಹಿಂದೂ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಅನ್ನು ನಮೂದಿಸುವುದನ್ನು ಕೈಬಿಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಿಸದಿದ್ದಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯ ದುಂಡು ಮೇಜಿನ ಸಭೆಯು ಜನಗಣತಿ ಬಹಿಷ್ಕರಿಸುವ ಎಚ್ಚರಿಕೆ ನೀಡಿತು.
ನಗರದ ಬಾಲಂ ಭಟ್ ಹಾಲ್ ರಾಧಾಕೃಷ್ಣ ಮಂದಿರದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಮೊದಲಿಗೆ ಸರಕಾರ ತಾವು ಜಾತಿ ಜನಗಣತಿ ನಡೆಸುತ್ತೇವೆ ಎಂದಿತ್ತು. ಆ ಬಳಿಕ ಅದನ್ನು ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಎಂದು ಹೇಳುತ್ತಿದೆ. ಆದ್ದರಿಂದ ಸರಕಾರ ತನಗಿರುವ ಗೊಂದಲವನ್ನು ಪರಿಹರಿಸಿ ಜನಗಣತಿ ಮಾಡಲಿ. ಅಲ್ಲದೆ ಜಾತಿಜನಗಣತಿಯನ್ನು ಕೇಂದ್ರ ಸರಕಾರ ನಡೆಸುವುದು ನಿಯಮ. ಆದ್ದರಿಂದ ಕೇಂದ್ರ ಸರಕಾರವೇ ಜಾತಿ ಜನಗಣತಿ ನಡೆಸಿ ರಾಜ್ಯ ಸರಕಾರ ಅದಕ್ಕೆ ಸಂಪನ್ಮೂಲ, ಮಾಹಿತಿಗಳನ್ನಷ್ಟೇ ಒದಗಿಸಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದೂ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಎಂಬ ಪದ ಬಳಕೆ ಮಾಡಿರುವುದನ್ನು ಹಿಂಪಡೆಯಬೇಕು. ಸರ್ಕಾರ ತಕ್ಷಣ ಆಯೋಗಕ್ಕೆ ಸೂಚನೆ ನೀಡಿ, 47 ಉಪಜಾತಿಗಳ ಪಟ್ಟಿಯನ್ನು ಕೈ ಬಿಡಬೇಕು. ಇದೇ ಮಾದರಿಯಲ್ಲಿ ಸಮೀಕ್ಷೆಯನ್ನು ಮುಂದುವರೆಸಿದಲ್ಲಿ ದೂರಗಾಮಿಯಾಗಿ ಮೀಸಲಾತಿಯಲ್ಲಿ ಏರುಪೇರು ಆಗುವ ಅಪಾಯವಿದೆ ಎಂದು ಸಭೆಯಲ್ಲಿ ಅಭಿಪ್ರಾಯ ಕೇಳಿ ಬಂತು. ಆಯೋಗದ ಈ ನಿರ್ಧಾರ ಮತಾಂತರಕ್ಕೆ ಸರ್ಕಾರ ಪ್ರೇರಣೆಯನ್ನು ನೀಡಿದಂತಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ. ತರಾತುರಿಯಲ್ಲಿ ನಡೆಸುವ ಸಮೀಕ್ಷೆಯ ಬಗ್ಗೆ ಆತಂಕವಿದ್ದು, ಆಯೋಗ ಮರು ಚಿಂತನೆಯನ್ನು ನಡೆಸಿ, ಇಡೀ ರಾಜ್ಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇಸಿಗೆ ಕಾಲದಲ್ಲಿ ಸಮೀಕ್ಷೆ ಮಾಡಬೇಕು. ಹಿಂದೂ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಎಂದು ನಮೂದಿಸಿದರೆ ಅವರಿಗೆ ಯಾವುದೇ ಮೀಸಲಾತಿ ಸಿಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಘೋಷಿಸಬೇಕು ಎಂದು ಸಭೆ ಅಗ್ರಹಿಸಿದೆ ಎಂದು ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
