ಬಂಟ್ವಾಳ – ಮನೆಯನ್ನೇ ಕಸಾಯಿಖಾನೆ ಮಾಡಿಕೊಂಡಿದ್ದ ಗೋಕಳ್ಳನ ಮನೆಯನ್ನೇ ಜಪ್ತಿ ಮಾಡಿದ ಪೊಲೀಸರು
Thursday, October 2, 2025
Edit
ಬಂಟ್ವಾಳ ಅಕ್ಟೋಬರ್ 02: ಗೋಕಳ್ಳತನ ಮಾಡಿ ಬಳಿಕ ಅಕ್ರಮವಾಗಿ ಮನೆಯಲ್ಲೇ ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಗೆ ಪೊಲೀಸರು ಶಾಕ್ ನೀಡಿದ್ದು, ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ ಗೋಕಳ್ಳನ ಮನೆಯನ್ನು ಸೀಜ್ ಮಾಡಿದ್ದಾರೆ. ಇದರೊಂದಿಗೆ ಗೋಕಳ್ಳತನದಲ್ಲಿ ತೊಡಗಿದ್ದವರಿಗೆ ಕಾನೂನಿನ ರುಚಿ ತೋರಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳ ನಿವಾಸಿಯಾದ ಹಸನಬ್ಬ ಎಂಬಾತ ಗೋಕಳ್ಳತನ, ಗೋವಧೆಯಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆತನ ಮೇಲೆ ಗೋಸಂರಕ್ಷಣಾ ಕಾಯಿದೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಆತನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲಾಗಿತ್ತು. ಆರೋಪಿ ವಿರುದ್ದ 2008 ಮತ್ತು 2017ರಲ್ಲೂ ಗೋಹತ್ಯೆ ಮತ್ತು ಗೋಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದವು, ಆರೋಪಿ ಗೋ ಕಳ್ಳತನ ಮಾಡಿ ಬಳಿಕ ಅದೇ ಗೋವುಗಳನ್ನು ತನ್ನ ಮನೆಯಲ್ಲಿ ಯಾವುದೇ ಪರಾವನಗಿ ಇಲ್ಲದೆ ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ. ಇದೀಗ ಪೊಲೀಸರು ಈತನ ಕಾರ್ಯಗಳನ್ನು ನಿಲ್ಲಿಸಲು ಆರೋಪಿ ಮನೆಯಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಸಾಯಿಖಾನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ ಮಂಗಳೂರು ಉಪವಿಭಾಗರವರಿಗೆ ವರದಿಯನ್ನು ಸಲ್ಲಿಸಿದ್ದರು.
ಅದರಂತೆ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ ಮಂಗಳೂರು ಉಪವಿಭಾಗ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮದಡಿ ಆರೋಪಿ ಹಸನಬ್ಬನಿಗೆ ಸೇರಿದ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಳ್ಳ ಪಾಡಿ ಎಂಬಲ್ಲಿರುವ ಮನೆಯನ್ನು ಜಪ್ತಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮನೆಯನ್ನೇ ಮುಟ್ಟುಗೋಲು ಮಾಡಿರುವುದು ಇದು ಮೊದಲನೆಯ ಪ್ರಕರಣವಾಗಿದೆ.