
ನ್ಯಾಯಾಲಯದಲ್ಲಿ ರಾಜೀ ಸಂಧಾನಕ್ಕೆ ಸುವರ್ಣಾವಕಾಶ – ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆಯ ವಿಶೇಷ ಮಧ್ಯಸ್ಥಿಕಾ ಅಭಿಯಾನ
Wednesday, September 3, 2025
Edit
ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ತ್ವರಿತ ನ್ಯಾಯಕ್ಕಾಗಿ ರಾಷ್ಟ್ರೀಯ ಲೋಕ ಅದಾಲತ್‌ನ್ನು ಸೆ.13ರಂದು ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ಮತ್ತು ಸುಳ್ಯ ನ್ಯಾಯಾಲಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಬಸವರಾಜ್ ತಿಳಿಸಿದ್ದಾರೆ.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ’ ಎಂಬ 90 ದಿನಗಳ ವಿಶೇಷ ಮಧ್ಯಸ್ಥಿಕಾ ಅಭಿಯಾನವನ್ನು ಜುಲೈ1ರಿಂದ ಅಕ್ಟೋಬರ್ 7ರವರೆಗೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ದ.ಕ. ಜಿಲ್ಲೆಯ ಸುಮಾರು 50 ನುರಿತ ವಕೀಲರು ಮಧ್ಯಸ್ಥಗಾರರಾಗಿ ಮಧ್ಯಸ್ಥಿಕೆ ಪ್ರಕ್ರಿಯೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮಧ್ಯಸ್ಥಿಕೆ ಅಭಿಯಾನ ಮತ್ತು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಹಾಗೂ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಅತೀ ಶೀಘ್ರ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ ಎಂದು ಹೇಳಿದರು.
ಮಧ್ಯಸ್ಥಿಕೆ ಅಭಿಯಾನ ಮತ್ತು ಲೋಕ್ ಅದಾಲತ್‌ನಲ್ಲಿ ಈ ಕೆಳಗಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಬಹುದು. ಮೋಟಾರು ವಾಹನ ಅಪಘಾತ ಪ್ರಕರಣಗಳು, ಚೆಕ್ ಅಮಾನ್ಯ ಹಾಗೂ ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಅಕ್ರಮ ಮರಳು ಸಾಗಾಟ, ಕಾರ್ಮಿಕ ಹಾಗೂ ನಷ್ಟ ಪರಿಹಾರ ವಿವಾದಗಳಿಗೆ ಸಂಬಂಧಪಟ್ಟ ಪ್ರಕರಣಗಳು, ವಿಚ್ಛೇದನ ಪ್ರಕರಣವನ್ನು ಹೊರತುಪಡಿಸಿ ವೈವಾಹಿಕ ಹಾಗೂ ಜೀವನಾಂಶ ಪ್ರಕರಣಗಳು, ಗ್ರಾಹಕರ ವಿವಾದಗಳಿಗೆ ಸಂಬಂಧಪಟ್ಟ ಪ್ರಕರಣಗಳು, ಭೂಸ್ವಾಧೀನ ಹಾಗೂ ಭೂಸ್ವಾಧೀನ ಪರಿಹಾರ ಹಂಚಿಕೆ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಕ್ಕೆ ಸಂಬಂಧಪಟ್ಟ ಪ್ರಕರಣಗಳು, ವೇತನ ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ಜನನ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಪ್ರಕರಣಗಳು, ಕಾನೂನಾತ್ಮಕವಾಗಿ ರಾಜಿಯಾಗಬಲ್ಲ ಎಲ್ಲ ರೀತಿಯ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು. ಅದರಲ್ಲಿ ನ್ಯಾಯಾಧೀಶರು ಹಾಗೂ ಸಂಬಂಧಪಟ್ಟ ಪ್ರಕರಣಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸುತ್ತಾರೆ. ಇಬ್ಬರು ಪಕ್ಷಗಾರರು ಪ್ರಕರಣವನ್ನು ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ವಿವರಿಸಿದರು.
ಪಕ್ಷಗಾರರಿಗೆ ಒಪ್ಪಿಗೆಯಾಗುವಂತೆ ವಿವಾದಗಳು ಇತ್ಯರ್ಥವಾಗುವುದರಿಂದ ಇಬ್ಬರ ಸಂಬಂಧವು ಉಳಿದು ಇಬ್ಬರೂ ಗೆದ್ದ ಮನೋಭಾವದಿಂದ ಸಂತೋಷವಾಗಿರಬಹುದು. ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಬಗೆಹರಿಸಿಕೊಂಡರೆ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು ಹಾಗೂ ಸದರಿ ಆದೇಶದ ವಿರುದ್ಧ ಯಾವುದೇ ಮೇಲ್ಮನವಿ ಇರುವುದಿಲ್ಲ. ಕಡಿಮೆ ಖರ್ಚಿನಲ್ಲಿ ತ್ವರಿತ ನ್ಯಾಯ ಪಡೆದುಕೊಂಡು ತಮ್ಮ ಸಮಯ ಹಾಗೂ ಸಂಬಂಧಗಳನ್ನು ಉಳಿಸಿಕೊಳ್ಳಲು ಇದೊಂದು ವಿಶೇಷ ಅವಕಾಶವಾಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇಚ್ಚಿಸಿ ಸೂಚಿಸಿದರೆ ನ್ಯಾಯಾಲಯಗಳಿಂದ ಪ್ರಕರಣಗಳನ್ನು ಸೂಚಿಸಲಾಗುತ್ತದೆ. ಅಂತಹ ಪ್ರಕರಣಗಳಲ್ಲಿ ಉಭಯ ಪಕ್ಷಗಾರರನ್ನು ಕರೆಸಿಕೊಂಡು ದಕ್ಷಿಣ ಕನ್ನಡ ನ್ಯಾಯಾಲಯದ ಸಮುಚ್ಚಯದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕು ನ್ಯಾಯಾಲಯಗಳ ಆವರಣಗಳಲ್ಲಿರುವ ಮಧ್ಯಸ್ಥಿಕಾ ಕೇಂದ್ರಗಳಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಸಾರ್ವಜನಿಕರು ತಮ್ಮ ಪ್ರಕರಣಗಳು ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇದ್ದರೆ ಉಚ್ಚನ್ಯಾಯಾಲಯ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಆವರಣಗಳಲ್ಲಿರುವ ಮಧ್ಯಸ್ಥಿಕಾ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದರು.