ಅನುಮೋದನೆಗೊಂಡು ವರ್ಷ ಕಳೇದ್ರೂ ಹಳಿ ಏರದ ಮಂಗಳೂರು-ರಾಮೇಶ್ವರಂ ಎಕ್ಸ್‌ಪ್ರೆಸ್ ರೈಲು...!!
Wednesday, September 3, 2025
Edit
ಮಂಗಳೂರು, ಸಪ್ಟೆಂಬರ್3: ಮಂಗಳೂರು ಸೆಂಟ್ರಲ್-ರಾಮೇಶ್ವರಂ ಎಕ್ಸ್‌ಪ್ರೆಸ್ (ನಂ. 16621/16622) ಹೊಸ ರೈಲು ಸೇವೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿ 1.5 ವರ್ಷ ಕಳೆದಿದ್ದು, ಇನ್ನೂ ಸೇವೆ ಆರಂಭಗೊಳ್ಳದಿರುವ ಬಗ್ಗೆ ರೈಲ್ವೆ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2024ರ ಮಾ. 15ರಂದು ಅಧಿಕೃತವಾಗಿ ಅನುಮೋದನೆ ನೀಡಲಾಗಿತ್ತು. ಮಂಡಪಂ ಮತ್ತು ರಾಮೇಶ್ವರಂ ನಡುವಿನ ವಿದ್ಯುದೀಕರಣ ಕಾರ್ಯ ಪೂರ್ಣಗೊಂಡ ಅನಂತರ ಈ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದರು. 2024ರ ಆಗಸ್ಟ್‌ನಲ್ಲೇ ಕಾಮಗಾರಿ ಪೂರ್ಣಗೊಂಡಿದ್ದರೂ ರೈಲು ಸೇವೆ ಆರಂಭಿಸಿಲ್ಲ. ಈ ಬಾರಿ ಓಣಂ ಹಬ್ಬದ ಸಂದರ್ಭದಲ್ಲಿ ಚಾಲನೆ ದೊರೆಯಬಹುದೆಂಬ ನಿರೀಕ್ಷೆಗಳು ಕೂಡ ಹುಸಿಯಾಗಿವೆ.
ಈ ರೈಲು ದಕ್ಷಿಣ ಕನ್ನಡ, ಕೇರಳ ಮತ್ತು ತಮಿಳುನಾಡಿನ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಲಿದೆ. ಕರಾವಳಿ ಪ್ರದೇಶವನ್ನು ರಾಮೇಶ್ವರಂ, ಮಧುರೈ ಮತ್ತು ಇತರ ಪ್ರಮುಖ ಜಂಕ್ಷನ್‌ಗಳೊಂದಿಗೆ ಸಂಪರ್ಕಿಸುವುದರಿಂದ ಈ ರೈಲಿನ ಸೇವೆ ಬಹಳ ಮುಖ್ಯವಾಗಿದೆ. ಹಾಗಾಗಿ ಶೀಘ್ರದಲ್ಲಿಯೇ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ರೈಲ್ವೇ ಬಳಕೆದಾರರು ಒತ್ತಾಯಿಸಿದ್ದಾರೆ.