ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟಕ್ಕೆ 12.79 ಕೋಟಿ ಲಾಭ
Monday, September 15, 2025
Edit
ಮಂಗಳೂರು, ಸಪ್ಟೆಂಬರ್15: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಗೊಳಪಟ್ಟ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು 2024-25ನೇ ಸಾಲಿನಲ್ಲಿ ರೂ.1174.00 ಕೋಟಿಗಳಷ್ಟು ರೂ. ವ್ಯವಹಾರ ಮಾಡಿದ್ದು, ರೂ.12.79 ಕೋಟಿ ನಿವ್ವಳ ಲಾಭ ದಾಖಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರ ರವಿರಾಜ್ ಹೆಗ್ಡೆ ಹೇಳಿದರು.
ಒಕ್ಕೂಟದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು 751 ಹಾಲು ಸಂಘಗಳು 3.97 ಲಕ್ಷ ಲೀಟರ್ ಹಾಲು ಶೇಖರಣೆ ಮಾಡುತ್ತಿದೆ. ಹಾಲಿನ ಶೇಖರಣೆ 2024-25 ನೇ ಸಾಲಿನಲ್ಲಿ ದಿನಕ್ಕೆ 3.42 ಲಕ್ಷ ಲೀಟರ್ ಸಂಗ್ರಹಣೆಯಾಗಿದ್ದು ಪ್ರಸ್ತುತ ಸಾಲಿನಲ್ಲಿ ಶೇ.16ರಷ್ಟು ಏರಿಕೆಯಾಗಿದ್ದು, 3.97 ಲಕ್ಷ ಲೀಟರ್‌ನಷ್ಟು ಹಾಲು ಸಂಗ್ರಹಣೆಯಾಗುತ್ತಿದೆ. ಈರೋಡ್, ಹೊರ ಜಿಲ್ಲೆಗಳಿಂದ ರಾಸು ಖರೀದಿಸಿ ಹೈನುಗಾರರಿಗೆ ನೀಡುವ ಯೋಜನೆ ಹಮ್ಮಿಕೊಂಡಿದೆ. ಈ ರಾಸುಗಳ ಸಾಗಾಣಿಕೆ ಹಾಗೂ ವಿಮಾ ವೆಚ್ಚವನ್ನು ಒಕ್ಕೂಟವೇ ಭರಿಸುತ್ತಿದೆ. ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರಿನಲ್ಲಿ ಒಕ್ಕೂಟಕ್ಕೆ 10.30 ಎಕರೆ ಸರಕಾರಿ ಜಾಗ ಒದಗಿಸಿರುವುದು ನಮ್ಮ ಯೋಜನೆ ವಿಸ್ತರಣೆಗೆ ಅನುಕೂಲವಾಗಿದೆ. ರಾಜ್ಯ ಸರಕಾರದ ಪ್ರೋತ್ಸಾಹಧನ ಜೂನ್‌ವರೆಗೆ ಬಂದಿದ್ದು, ಉಳಿದ ಹಣ ಸಾಮಾನ್ಯವಾಗಿ ಏಕಕಂತಿನಲ್ಲಿ ಬರುತ್ತದೆ. ರೈತ ಕಲ್ಯಾಣ ಟ್ರಸ್ಟ್ 2024-25 ನೇ ಸಾಲಿನಲ್ಲಿ ಒಟ್ಟು ರೂ.2.05 ಕೋಟಿಯಷ್ಟು ಮೊತ್ತವನ್ನು ರೈತರ ಮರಣ, ವೈದ್ಯಕೀಯ ವೆಚ್ಚ, ರಾಸುಗಳ ಮರಣಕ್ಕೆ ಪಾವತಿಸಲಾಗಿದೆ. ರೈತರ ರಾಸುಗಳಿಗೆ ವಿಮಾ ಯೋಜನೆಯಲ್ಲಿ ಒಟ್ಟು 30629 ರಾಸುಗಳಿಗೆ ವಿಮೆಯನ್ನು ಮಾಡಿಸಲಾಗಿದ್ದು, 1177 ಸಂಖ್ಯೆಯಷ್ಟು ಕ್ಲೇಮ್ ನೀಡಲಾಗಿದೆ. ಒಕ್ಕೂಟದಿಂದ ಐಸ್‌ಕ್ರೀಂ ಘಟಕ ರಚಿಸುವ ನಿಟ್ಟಿನಲ್ಲಿ ಯೋಜನರೆ ರೂಪಿಸಲಾಗುತ್ತಿದೆ. 2024-25 ನೇ ಸಾಲಿನಲ್ಲಿ ಹಸಿರು ಹುಲ್ಲ್ಲು ಅಭಿವದ್ಧಿ, ಹುಲ್ಲು ಕತ್ತರಿಸುವ ಯಂತ್ರ ಖರೀದಿ ಸೇರಿದಂತೆ ನಾನಾ ಯೊಜನೆಗಳಿಗೆ ರೂ.2.60 ಕೋಟಿಗಳನ್ನು ಅನುದಾನದ ರೂಪದಲ್ಲಿ ನೀಡಲಾಗಿದೆ ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷ, ನಿರ್ದೇಶಕರಾದ ಸುಚರಿತ ಶೆಟ್ಟಿ, ಕೆಎಂಎಫ್ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷರಾದ ಉದಯ ಕೋಟ್ಯಾನ್, ನಿದೇಶಕರಾದ ಎಸ್.ಬಿ. ಜಯರಾಮ ರೈ, ಕೆ. ಶಿವಮೂರ್ತಿ, ಎಚ್. ಪ್ರಭಾಕರ್, ಕೆ. ಚಂದ್ರಶೇಖರ ರಾವ್, ಮಮತಾ ಆರ್. ಶೆಟ್ಟಿ, ನಂದರಾಮ್ ರೈಘಿ, ಸುಧಾಕರ ರೈ, ಒಕ್ಕೂಟದ ವ್ಯವಸ್ಥಾಪಕರಾದ ರವಿರಾಜ್ ಉಡುಪ, ಮಧುಸೂದನ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.