
ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಗಳಿಂದ ಅಪಘಾತಗಳು ಸಂಭವಿಸುತ್ತಿದೆ - ಶಾಸಕ ಐವನ್ ಡಿಸೋಜ ಹೇಳಿಕೆ
Monday, September 15, 2025
Edit
ಮಂಗಳೂರು ಸೆಪ್ಟೆಂಬರ್ 15: ರಾಷ್ಟ್ರೀಯ ಹೆದ್ದಾರಿಗಳನ್ನು ಹೇಗೆ ಮಾಡಬಹುದು ಎಂದು ಕೇರಳಕ್ಕೆ ಹೋಗಿ ನೋಡಿ ಅಲ್ಲಿ ಸಾದ್ಯವಾಗುವಂಥದ್ದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಐವನ್ ಡಿಸೋಜಾ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಕರಾವಳಿ ಭಾಗದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅವೈಜ್ಞಾನಿಕತೆ ಮತ್ತು ಗುಣಮಟ್ಟದ ಬಗ್ಗೆ ತನಿಖೆಗೆ ಆದೇಶಿಸಬೇಕು. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು. ಕರಾವಳಿಯ ಹೆದ್ದಾರಿಗಳಲ್ಲಿ ನೀರು ನಿಂತಿರುತ್ತದೆ. ಇಲ್ಲಿನ ಯಾವುದೇ ಪ್ಲೈಓವರ್ ಗಳು ವೈಜ್ಞಾನಿಕವಾಗಿ ನಿರ್ಮಾಣ ಮಾಡಿಲ್ಲ ಎಂದರು. ಅವೈಜ್ಞಾನಿಕ ಕಾಮಗಾರಿಗಳಿಂದ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಉಳಿದೆಲ್ಲ ಕಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಅಪೂರ್ಣವಾಗಿವೆ. ಹೆದ್ದಾರಿಯಲ್ಲೇ ಮಳೆ ನೀರ ಪ್ರವಾಹ ಹರಿಯುತ್ತದೆ. ಯಾವುದೇ ಹೆದ್ದಾರಿ ನಿಗದಿತ ಕಾಲಕ್ಕೆ ಪೂರ್ತಿಯಾಗಿಲ್ಲ. ಹೆದ್ದಾರಿಗಳಲ್ಲೇ ಈ ರೀತಿಯ ಸಮಸ್ಯೆಗಳು ಏಕೆ ಉದ್ಭವಿಸಿವೆ ಎಂಬ ಬಗ್ಗೆ ತನಿಖೆ ನಡೆಸಿ, ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮಾಡೋದು ಹೇಗೆ ಅಂತ ಕೇರಳ ಭಾಗಕ್ಕೆ ಹೋಗಿ ನೋಡಿ. ಅಲ್ಲಿ ಸಾಧ್ಯವಾಗುವಂಥದ್ದು ಕರಾವಳಿಯಲ್ಲೇಕೆ ಸಾಧ್ಯ ಆಗುತ್ತಿಲ್ಲ? ಸಾಕಷ್ಟು ಅನುದಾನ ಇದ್ದರೂ ಹೆದ್ದಾರಿಗಳ ನಿರ್ವಹಣೆಯೇ ಆಗುತ್ತಿಲ್ಲ. ಅನುದಾನ ಕೊರತೆ ಇದ್ದರೆ ಸಂಸದರು ಈ ವಿಚಾರವನ್ನು ಸಂಸತ್ತಲ್ಲೇ ಹೇಳಲಿ ಎಂದು ಐವನ್ ಡಿಸೋಜ ಸವಾಲು ಹಾಕಿದರು.