ಮತ ಕಳ್ಳತನ ವಿಚಾರ- ಮಂಗಳೂರಿನಲ್ಲಿ ಕಾಂಗ್ರೆಸ್ ನಿಂದ ಪಂಜಿನ ಮೆರವಣಿಗೆ- ಚುನಾವಣಾ ಆಯೋಗದ ವಿರುದ್ಧ ಆಕ್ರೋಶ
Tuesday, August 26, 2025
Edit
ಮಂಗಳೂರು, ಆಗಸ್ಟ್ 25: ಮತಕಳ್ಳತನದ ವಿರುದ್ಧ ದೇಶದೆಲ್ಲೆಡೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೋರಾಟ ನಡೆಸುತ್ತಿದ್ದು, ಅವರಿಗೆ ಬೆಂಬಲವಾಗಿ ದ.ಕ. ಜಿಲ್ಲಾ ಯೂತ್ ಕಾಂಗ್ರೆಸ್ ವತಿಯಿಂದ ಸೋಮವಾರ ಮಂಗಳೂರಿನಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ನಗರದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದ ಬಳಿ ಪಂಜಿನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪಂಜಿನೊಂದಿಗೆ ಮೆರವಣಿಗೆ ನಡೆಸಿದರು.
ಮೆರವಣಿಗೆಯ ಉದ್ದಕ್ಕೂ ಕೇಂದ್ರದ ಬಿಜೆಪಿ ಸರಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿದರು. ಚುನಾವಣಾ ಆಯೋಗ ಒಂದು ಪಕ್ಷದ ಪರ ಕೆಲಸ ಮಾಡುತ್ತಿರುವುದಾಗಿ ಆಕ್ರೋಶಗಳು ಕೇಳಿಬಂತು. ಬಳಿಕ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಮುಖಂಡರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ ಸಂವಿಧಾನ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ಬಿಜೆಪಿ ಸರಕಾರ ಮತ ಕಳ್ಳತನ ಮಾಡಿದ ವಿರುದ್ಧ ರಾಹುಲ್ ಗಾಂಧಿ ಈಗಾಗಲೇ ಜನಜಾಗೃತಿ ಕಾರ್ಯವನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಪಂಜಿನ ಮೆರವಣಿಗೆ ಪೂರಕವಾಗಿದೆ ಎಂದರು.
ಬಳಿಕ ಮಾತನಾಡಿದ ಮಾಜಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್ ಆರ್ ಮಾತನಾಡಿ ಮತ ಕಳ್ಳತನದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶಾದ್ಯಂತ ಹೋರಾಟಕ್ಕೆ ಕಾಂಗ್ರೆಸ್ ಇಳಿದಿದ್ದು ಮತಗಳ ಕಳ್ಳತನದ ಬಗ್ಗೆ ಎಚ್ಚೆತ್ತುಕೊಳ್ಳಲು ಅವಶ್ಯಕತೆ ಇದೆ ಎಂದರು.
ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ, ಮಾಜಿ ಸಚಿವ ರಮಾನಾಥ ರೈ, ಮುಖಂಡರಾದ ಪದ್ಮರಾಜ್ ಆರ್. ಪೂಜಾರಿ, ಜೆ.ಆರ್. ಲೋಬೊ, ಅಪ್ಪಿಲತಾ, ಸಾಹುಲ್ ಹಮೀದ್, ಮಾಜಿ ಮೇಯರ್ ಶಶಿಧರ ಹೆಗ್ಡೆ , ಯೂತ್ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಭಾಗವಹಿಸಿದ್ದರು.