
ಮಂಗಳೂರು – ಚಿನ್ನದ ಗಟ್ಟಿ ಕಳ್ಳತನ ಸಂಬಂಧಿತ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನೂ ಸೇರಿದಂತೆ ಐವರು ಬಂಧಿತರು
Monday, September 29, 2025
Edit
ಮಂಗಳೂರು ಸೆಪ್ಟೆಂಬರ್ 29: ಚಿನ್ನದ ಅಂಗಡಿ ಸಿಬ್ಬಂದಿಯನ್ನು ಕಿಡ್ನಾಪ್ ಮಾಡಿ ಆತನಿಂದ ಕೋಟಿ ಬೆಲೆಬಾಳುವ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಉಳ್ಳಾಲದ ನಿವಾಸಿಗಳಾದ ಫಾರಿಶ್ (18), ಸಫ್ವಾನ್ (23), ಅರಾಫತ್ ಆಲಿ (18), ಫರಾ ಝ್ (19) ಹಾಗೂ ಓರ್ವ ಅಪ್ರಾಪ್ತ ಬಾಲಕ ಸೇರಿದ್ದಾನೆ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ 26 ರಂದು ಚಾಯ್ಸ್ ಗೋಲ್ಡ್ ಎಂಬ ಹೆಸರಿನ ಚಿನ್ನಾಭರಣದ ಅಂಗಡಿಯ ಕೆಲಸಗಾರ ಮುಸ್ತಾಫ ತಮ್ಮ ಸ್ಕೂಟರ್ ನಲ್ಲಿ ಸುಮಾರು 1.5 ಕೋಟಿ ಮೌಲ್ಯದ 1650 ಗ್ರಾಂ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗುತ್ತಿರುವ ವೇಳೆ ರಾತ್ರಿ 8 – 45ರ ಸುಮಾರಿಗೆ ಮಂಗಳೂರಿನ ಕಾರ್ ಸ್ಟ್ರೀಟ್ ಬಳಿ ಆರೋಪಿಗಳು ಅಡ್ಡಗಟ್ಟಿದ್ದಾರೆ. ಬಳಿಕ ಮುಸ್ತಾಫನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿ ಮಂಗಳೂರಿನ ಎಕ್ಕೂರು ಬಳಿ ನಿಲ್ಲಿಸಿ ಆತನಿಂದ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ್ದರು. ಈ ಕುರಿತಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಓರ್ವ ಅಪ್ರಾಪ್ತ ಸೇರಿದಂತೆ 5 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ತನಿಖೆ ನಡೆಸಿದ ವೇಳೆ ಚಾಯ್ಸ್ ಗೋಲ್ಡ್ ಕಂಪೆನಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಫಾರಿಶ್ ಎಂಬಾತ ಈ ದರೋಡೆಯ ಮಾಸ್ಟರ್ ಮೈಂಡ್ ಎಂದು ತಿಳಿದು ಬಂದಿದೆ. ಆರೋಪಿ ಪಾರಿಶ್ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಬಾಲಕನಿಂದ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗುವ ಬಗ್ಗೆ ಮಾಹಿತಿ ಪಡೆದಿದ್ದಾನೆ. ಅದರಂತೆ ಅಪ್ರಾಪ್ತ ಬಾಲಕ ಸೆಪ್ಟೆಂಬರ್ 26 ರಂದು ಮುಸ್ತಾಫ ಚಿನ್ನದಗಟ್ಟಿ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಆರೋಪಿ ಪಾರೀಶ್ ಗೆ ಮಾಹಿತಿ ನೀಡಿದ್ದಾನೆ. ಅದರಂತೆ ಈ ಆರೋಪಿಗಳು ಇತರ ಆರೋಪಿಗಳೊಂದಿಗೆ ಸೇರಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಲು ಪೂರ್ವಯೋಜಿತ ಸಂಚು ರೂಪಿಸಿದ್ದಾರೆ.
ಮತ್ತೊಬ್ಬ ಆರೋಪಿ ಸಫ್ವಾನ್ ದರೋಡೆ ಕೃತ್ಯಕ್ಕೆ ಕಾರನ್ನು ಒದಗಿಸಿದ್ದಾನೆ. ಮುಸ್ತಾಫರವರು ತನ್ನ ಸ್ಕೂಟರಿನ ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಅರಾಫತ್ ಆಲಿ ಮತ್ತು ಫರಾಝ್ ರವರು ಸ್ಕೂಟರಿನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಇದೇ ಸಮಯ ಉಳಿದ ಆರೋಪಿಗಳು ಸಫ್ವಾನ್ ಒದಗಿಸಿದ ಬಿಳಿ ಬಣ್ಣದ ಕಾರೊಂದರಲ್ಲಿ ಬಂದು ಮುಸ್ತಾಫನನ್ನು ಬಲತ್ಕಾರವಾಗಿ ಕಾರಿನಲ್ಲಿ ಹಾಕಿ ಅಪಹರಿಸಿಕೊಂಡು ಹೋಗಿ ಹಲ್ಲೆ ಮಾಡಿ ಮಂಗಳೂರು ಎಕ್ಕೂರು ಎಂಬಲ್ಲಿ ಅವರನ್ನು ಕಾರಿನಿಂದ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಸ್ಕೂಟರ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳು ಹಾಗೂ ಸೊತ್ತನ್ನು ಸ್ವಾಧಿನಪಡಿಸಿಕೊಳ್ಳಲು ತನಿಖೆ ನಡೆಸಲಾಗುತ್ತಿದೆ.