
ಕರಾವಳಿಯಲ್ಲಿ ಕೆಥೋಲಿಕ್ ಕ್ರೈಸ್ತರ ತೆನೆ ಹಬ್ಬ ಸಂಭ್ರಮ ಆಚರಣೆ
Monday, September 8, 2025
Edit
ಏಸು ಕ್ರಿಸ್ತರಿಗೆ ಜನ್ಮ ನೀಡಿದ ಮಹಾ ಮಾತೆ ಪವಿತ್ರ ಮೇರಿ ಮಾತೆಯ ಜನ್ಮ ದಿನವಾಗಿರೋ ಇಂದು ಕರಾವಳಿಯ ಕ್ರೈಸ್ತರಿಗೆ ವಿಶೇಷ ದಿನ. ಮೇರಿ ಮಾತೆಯ ಹುಟ್ಟು ಹಬ್ಬವನ್ನ ವಿಶೇಷ ರೀತಿಯಲ್ಲಿ ಆಚರಿಸೋ ಕ್ರೈಸ್ತರು ಇದನ್ನ ತೆನೆ ಹಬ್ಬ ಅಥವಾ ಬೆಳೆ ಹಬ್ಬ ಅಂತ ಆಚರಿಸುತ್ತಾರೆ. ಈ ಸಂಧರ್ಭದಲ್ಲಿ ವಿಶೇಷವಾಗಿ ಹೂವುಗಳನ್ನ ಎಸೆದು ಹೊಸ ಪೈರುಗಳನ್ನ ಹಿಡಿದು ಮೇರಿ ಮಾತೆಗೆ ಸ್ವಾಗತ ನೀಡುತ್ತಾರೆ.
ಕರಾವಳೀ ಕರ್ನಾಟಕದಲ್ಲಿ ಸೆಪ್ಟಂಬರ್ ತಿಂಗಳಲ್ಲಿ ಕೃಷಿಕರು ತಮ್ಮ ಬೆಳೆಗಳನ್ನ ಕೊಯ್ಯುವ ಸಮಯ. ಇದೇ ಸಮಯಕ್ಕೆ ಅಂದ್ರೆ ಸೆಪ್ಟಂಬರ್ 8 ರಂದು ಮೇರಿ ಮಾತೆಯ ಜನ್ಮ ದಿನ ಕೂಡಾ ಬರುತ್ತೆ. ಕೃಷಿಯ ಮೂಲಕ ಹೊಸ ಬೆಳೆಗಳು ಮನೆಗೆ ಬರೋ ಇದೇ ಸಂಧರ್ಭದಲ್ಲಿ ಮೇರಿ ಮಾತೆಯ ಜನ್ಮ ದಿನ ಕೂಡಾ ಬರೋದ್ರಿಂದ ಕ್ರೈಸ್ತರು ಈ ದಿನವನ್ನ ತೆನೆ ಹಬ್ಬ ಅಂತಾನೇ ಆಚರಿಸ್ತಾರೆ. ಮೋಂತಿ ಫೆಸ್ಟ್, ತೆನೆ ಹಬ್ಬ , ಬೆಳೆ ಹಬ್ಬ ಹೀಗೆ ಹಲವು ಹೆಸರಿನಿಂದ ಕರೆಯುವ ಈ ಹಬ್ಬಕ್ಕೆ ಕ್ರೈಸ್ತ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಕೂಡಾ ನಡೆಯೊತ್ತೆ. ತಾವು ಬೆಳೆದ ಹೊಸ ಬೆಳೆಗಳನ್ನ ಹಲವು ವಿಧದ ಹೂವುಗಳನ್ನ ಮೇರಿ ಮಾತೆಗೆ ಸಮರ್ಪಿಸಿ ಕೃತಾರ್ತರಾಗ್ತಾರೆ. ಚರ್ಚ್ ಗಳಿಗೆ ತರುವ ಹೊಸ ಭತ್ತದ ಕಣಗಳನ್ನ ಧರ್ಮಗುರುಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೇರಿ ಮಾತೆಗೆ ಸಮರ್ಪಿಸ್ತಾರೆ. ಬಳಿಕ ಇದನ್ನ ಭಕ್ತರಿಗೆ ಹಂಚುವ ಮೂಲಕ ಎಲ್ಲರಿಗೂ ಅವಿಭಕ್ತ ಕುಟುಂಬದ ಸಾಮರಸ್ಯತೆಯ ಬಗ್ಗೆ ಸಂದೇಶ ನೀಡ್ತಾರೆ. ಭತ್ತದ ಕಣಗಳನ್ನ ಪಡೆದ ಬಳಿಕ ಭಕ್ತರು ಅದನ್ನ ಮನೆಗೆ ಕೊಂಡೊಯ್ದು ಸಿಹಿ ಪಾಯಸ ಮಾಡಿ ಕುಟುಂಬ ಸಧಸ್ಯರೆಲ್ಲರೂ ಒಟ್ಟಾಗಿ ಸೇವಿಸ್ತಾರೆ. ಈ ಹಿನ್ನೆಲೆ ಮಂಗಳೂರಿನ ಬೊಂದೇಲ್ ಸಂತ ಲಾರೆನ್ಸರ ಪುಣ್ಯ ಕ್ಷೇತ್ರದಲ್ಲಿ ವಿಶೇಷ ಬಲಿಪೂಜೆಯನ್ನು ಚರ್ಚ್ ನ ಪ್ರಧಾನ ಧರ್ಮಗುರು ಫಾ. ಆ್ಯಂಡ್ರೂ ಲಿಯೋ ಡಿಸೋಜಾ ನೆರವೇರಿಸಿದರು.
ಈ ಹಬ್ಬಕ್ಕೆ ಮುನ್ನೂರು ವರ್ಷಗಳ ಐತಿಹ್ಯವಿದ್ದು, ಹಬ್ಬಕ್ಕೂ ಒಂಬತ್ತು ದಿನಗಳ ಮೊದಲು ಮಕ್ಕಳು ತಮ್ಮದೇ ಹಿತ್ತಲ ಬಗೆ ಬಗೆಯ ಹೂವುಗಳನ್ನು ಆಯ್ದು ಚರ್ಚ್ ಗಳಿಲ್ಲಿ ಇರೋ ಮೇರಿ ಮಾತೆಯ ಪ್ರತಿಮೆಗೆ ಸಮರ್ಪಿಸ್ತಾರೆ. ಕೊನೆಯ ದಿನವಾದ ಇಂದು ಭತ್ತದ ತೆನೆಯನ್ನು ಆರ್ಶೀವದಿಸಿ ಎಲ್ಲರಿಗೂ ಹಂಚಲಾಗುತ್ತದೆ. ಕರಾವಳಿಯಲ್ಲಿ ಪ್ರಮುಖವಾಗಿ ಕೃಷಿ ಪ್ರದಾನ ಕುಟುಂಬಗಳನ್ನ ಹೊಂದಿರೋ ಕ್ರೈಸ್ತ ಸಮುದಾಯಗಳು ಹೆಚ್ಚಾಗಿ ಈ ಹಬ್ಬವನ್ನ ಆಚರಿಸುತ್ತಾರೆ. ತಮ್ಮ ಪ್ರಥಮ ಬೆಳೆಯನ್ನ ದೇವರಿಗೆ ಸಮರ್ಪಿಸೋದು ಹಾಗೂ ಮುಂದಿನ ಬಾರಿ ಉತ್ತಮ ಫಸಲು ನೀಡು ಅಂತ ದೇವರಿಗೆ ಪ್ರಾರ್ಥಿಸೊದು ಮತ್ತು ಹೊಸ ಫಸಲು ಸೇವಿಸುವ ದಿನ ಸಂಪೂರ್ಣ ಮಾಂಸಾಹಾರವನ್ನ ತ್ಯಜಿಸುವುದು ಈ ಹಬ್ಬಕ್ಕೆ ಇರೋ ಪ್ರಾಮುಖ್ಯತೆ.
ಮೇರಿ ಮಾತೆಯ ಹುಟ್ಟು ಹಬ್ಬವಾಗಿ ಕೃಷಿಕರಿಗೆ ಬೆಳೆ ಹಬ್ಬವಾಗಿ ಹೂ ಎಸೆಯುವ ಮಕ್ಕಳಿಗೆ ಮಕ್ಕಳ ಹಬ್ಬವಾಗಿ ಆಚರಿಸುವ ಈ ವಿಶೇಷ ಸಂಧರ್ಬದಲ್ಲಿ ಎಲ್ಲಾ ಕ್ರೈಸ್ತ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಸಲಾಗುತ್ತದೆ. ಈ ಹಬ್ಬದ ಮೂಲಕ ಕುಟುಂಬ ಸಂಭಂದಗಳು ಹೇಗೆ ಗಟ್ಟಿಯಾಗಿರಬೇಕು ಅನ್ನೋ ಸಂದೇಶ ಕೂಡಾ ಜೀವನಕ್ಕೆ ಹಬ್ಬಗಳು ಹೇಗೆ ಮೌಲ್ಯವನ್ನ ಹೆಚ್ಚಿಸುತ್ತೆ ಅನ್ನೋ ಜೀವನ ಮಾರ್ಗವನ್ನ ಕೂಡಾ ತೋರಿಸುತ್ತದೆ.

