
ಎಲ್ಲಾ ಧರ್ಮೀಯರಿಗೂ ತೆರೆದ ಮಸೀದಿ - ಕೋಮುಸೌಹಾರ್ದತೆಗೆ ಮಂಗಳೂರಿನಲ್ಲೊಂದು ವಿಭಿನ್ನ ಪ್ರಯತ್ನ
Sunday, September 14, 2025
Edit
ಇಸ್ಲಾಂ ಧರ್ಮದ ಆಚಾರ- ವಿಚಾರಗಳು ಮತ್ತು ಮಸೀದಿಗಳ ಕುರಿತಾಗಿ ಸಮಾಜದಲ್ಲಿರುವ ಅನುಮಾನ, ತಪ್ಪು ಕಲ್ಪನೆಗಳನ್ನು ದೂರ ಮಾಡಿ, ಎಲ್ಲಾ ಧರ್ಮೀಯರಿಗೂ ಮಸೀದಿಗೆ ಮುಕ್ತ ಪ್ರವೇಶ ನೀಡಿ ಸರಿಯಾದ ಮಾಹಿತಿ ನೀಡುವ ‘ಸಾರ್ವಜನಿಕ ಮಸೀದಿ ದರ್ಶನ’ದ ಪ್ರಥಮ ಕಾರ್ಯಕ್ರಮ ಮಂಗಳೂರಿನ ಜಾಮಿಯಾ ಮಸೀದಿಯಲ್ಲಿ ನಡೆಯಿತು.
ನಗರದ ಕುದ್ರೋಳಿಯ ಜಾಮಿಯಾ ಮಸೀದಿ ಭಾನುವಾರ ಬೆಳಗ್ಗಿನಿಂದ ಸಂಜೆವರೆಗೂ ಸರ್ವ ಧರ್ಮೀಯರಿಗೆ ಮುಕ್ತವಾಗಿತ್ತು. ನೂರಾರು ಮಂದಿ ಭೇಟಿ ನೀಡಿ ತಮ್ಮ ಪ್ರಶ್ನೆಗಳಿಗೆ ಅಲ್ಲಿದ್ದ ಸ್ವಯಂ ಸೇವಕರಿಂದ ಉತ್ತರ ಪಡೆದುಕೊಂಡರು. ಮಸೀದಿಯ ಪ್ರತಿಯೊಂದು ಸ್ಥಳಗಳಿಗೂ ಭೇಟಿ ನೀಡಿ ಫೋಟೋ ವೀಡಿಯೋಗಳನ್ನು ಚಿತ್ರೀಕರಿಸಿದರು. ಪ್ರಾರ್ಥನೆಯ ರೀತಿ ನೀತಿಗಳನ್ನು ಸ್ವತಃ ನೋಡಿ ಅನುಭವ ಪಡೆದುಕೊಂಡರು.ಜಮಾತೆ ಇಸ್ಲಾಮಿ ಹಿಂದ್ ಮಂಗಳೂರು, ಮುಸ್ಲಿಂ ಐಕ್ಯತಾ ವೇದಿಕೆ ಹಾಗೂ ಕುದ್ರೋಳಿ ಜಾಮಿಯಾ ಮಸೀದಿ ಆಡಳಿತ ಮಂಡಳಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಸೀದಿಗೆ ಆಗಮಿಸಿದ ಎಲ್ಲರಿಗೂ ಖರ್ಜೂರ, ಕಲ್ಲಂಗಡಿ ಜ್ಯೂಸ್, ಮಧ್ಯಾಹ್ನ ಊಟ, ಇಸ್ಲಾಂಗೆ ಸಂಬಂಧಿಸಿದ ಪುಸ್ತಕಗಳ ಉಡುಗೊರೆ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ಅಲ್ಲಲ್ಲಿ ಸ್ವಾಗತ ಕೋರಲು, ಜನರ ಅನುಮಾನಗಳನ್ನು ಪರಿಹರಿಸಲು ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು. ಬೆಳಗ್ಗಿನಿಂದ ಸಂಜೆ 7 ಗಂಟೆವರೆಗೂ ಜನರು ಮಸೀದಿಗೆ ಭೇಟಿ ನೀಡಿದರು.
ಕುರ್‌ಆನ್ ಮತ್ತು ಪ್ರವಾದಿ ಸಂದೇಶ ಸಾರುವ ಫಲಕಗಳು, ವಿವಿಧ ಭಾಷೆಯ ಕುರ್‌ಆನ್ ಅನುವಾದ ಗ್ರಂಥಗಳನ್ನು ಇಡಲಾಗಿತ್ತು. ಅಲ್ಲಾಹು ಅಕ್ಬರ್ ಕರೆಯ ಕನ್ನಡ ಸಂದೇಶವನ್ನು ಬರೆದ ಫಲಕಗಳನ್ನು ಇಡಲಾಗಿತ್ತು. ಅಝಾನ್ ಜೋರಾಗಿ ಹೇಳುವುದು ಏಕೆ? ಅದರರ್ಥವೇನು? ಧರ್ಮಗುರುಗಳಿಗೆ ಏನೆಂದು ಕರೆಯುತ್ತಾರೆ? ಅವರಿಗೆ ಏನೆಲ್ಲ ಸೌಲಭ್ಯಗಳಿವೆ? ಇದರ ನಿರ್ವಹಣೆಗೆ ಆದಾಯವೇನು? ಜಮಾತ್ ಅಂದರೇನು? ಇತ್ಯಾದಿ ಅನೇಕ ಪ್ರಶ್ನೆಗಳಿಗೆ ಸ್ವಯಂ ಸೇವಕರು ಉತ್ತರಿಸುತ್ತಿದ್ದರು.
ಮಸೀದಿ ದರ್ಶನ ಕಾರ್ಯಕ್ರಮವನ್ನು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಉದ್ಘಾಟಿಸಿದರು. ಮುಸ್ಲಿಮರು ದೇವಾ ಅಂದರೆ, ನಾವು ದೇವರು ಅನ್ನುತ್ತೇವೆ. ಧರ್ಮಗಳ ನಡುವೆ ಅಪನಂಬಿಕೆ ಎಂದೂ ಇರಬಾರದು ಎಂದರು.
ಹೋಲಿ ರೊಸಾರಿಯೊ ಚರ್ಚ್ ಧರ್ಮಗುರು ಫಾ. ವಲೇರಿಯನ್ ಡಿಸೋಜ ಮಾತನಾಡಿ, ಪರಿಸ್ಪರ ಪ್ರೀತಿಯೇ ಧರ್ಮಗಳ ತಿರುಳು. ದೇವಸ್ಥಾನ, ಮಸೀದಿ, ಚರ್ಚ್‌ಗಳ ಆಚರಣೆಗಳು ಎಲ್ಲರಿಗೂ ತಿಳಿದಿರಬೇಕು. ಜನರು ಪರಸ್ಪರ ಅರ್ಥ ಮಾಡಿಕೊಂಡು ಬದುಕಬೇಕು, ಈ ನಿಟ್ಟಿನಲ್ಲಿ ಕೈಗೊಂಡ ಈ ಕಾರ್ಯಕ್ರಮ ಮಾದರಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಜೈರಾಜ್ ಎಚ್., ಯುಎಇ ಮೊಗವೀರ ಸಂಘದ ಅಧ್ಯಕ್ಷ ಲೋಕೇಶ್ ಪುತ್ರನ್, ಬೆಂಗರೆ ಮಹಾಸಭಾ ಅಧ್ಯಕ್ಷ ಚೇತನ್ ಬೆಂಗರೆ, ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಿನ್ಸಿಪಾಲ್ ಬಿ.ಎಸ್.ಶರ್ಫುದ್ದೀನ್ ಶುಭ ಹಾರೈಸಿದರು.
ಕುದ್ರೋಳಿ ಜಾಮಿಯಾ ಮಸೀದಿ ಅಧ್ಯಕ್ಷ ಕೆ.ಎಸ್.ಮೊಹಮ್ಮದ್ ಮಸೂದ್ ಅಧ್ಯಕ್ಷತೆ ವಹಿಸಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಉತ್ತರದ ಅಧ್ಯಕ್ಷ ಇಸ್ಹಾಕ್ ಪುತ್ತೂರು ಪ್ರವಾದಿ ಸಂದೇಶ ನೀಡಿದರು. ಕುದ್ರೋಳಿ ಖಾಝಿ ಮುಫ್ತಿ ಶೇಕ್ ಮುತಹ್ಹರ್ ಹುಸೈನ್ ಖಾಸ್ಮಿ, ಶಾಹ ಅಮೀರ್ ಮಸೀದಿಯ ಖತೀಬ್ ರಿಯಾಝುಲ್ ಹಕ್ ರಷಾದಿ, ಮಾಜಿ ಕಾರ್ಪೊರೇಟರ್ ಅಬೂಬಕರ್, ಅಬ್ದುಲ್ ಅಝೀಝ್ ಮತ್ತಿತರರು ಉಪಸ್ಥಿತರಿದ್ದರು.