
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರೆಟಿಕುಲೇಟೆಡ್ ಹೆಬ್ಬಾವಿನ ಮರಿಗಳ ಜನನ
Saturday, July 16, 2022
Edit
ಮಂಗಳೂರು
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರೆಟಿಕುಲೇಟೆಡ್ ಹೆಬ್ಬಾವಿನ ಮರಿಗಳ ಜನನ
ಪಿಲಿಕುಳ ಮೃಗಾಲಯದಲ್ಲಿ ಎರಡು ರೆಟಿಕುಲೇಟೆಡ್ ಹೆಬ್ಬಾವುಗಳು ಒಟ್ಟು 50 ಮೊಟ್ಟೆಯಿಟ್ಟಿದ್ದು, ಎರಡು ತಿಂಗಳುಗಳಿಂದ ಕಾವು ನೀಡುತಿದ್ದು, ಈಗ ಮರಿಗಳು ಮೊಟ್ಟೆಒಡೆದು ಹೊರಬರಲು ಪ್ರಾರಂಭಿಸಿವೆ. ಸುಮಾರು 40 ರಿಂದ 45 ಮರಿಗಳನ್ನು ನಿರೀಕ್ಷಿಸಲಾಗಿದೆ. ಈ ಹಿಂದೆ ರೆಟಿಕುಲೇಟೆಡ್ ಹೆಬ್ಬಾವುಗಳು ಎರಡು ಬಾರಿ 10 ಹಾಗೂ 25 ಮೊಟ್ಟೆಗಳನ್ನು ಮರಿ ಮಾಡಿದ್ದು, ಅವುಗಳಲ್ಲಿ 10 ಮರಿಗಳನ್ನು ಪ್ರಾಣಿವಿನಿಮಯ ಯೋಜನೆಯಲ್ಲಿ ಇತರೆ ಮೃಗಾಲಯಗಳಿಗೆ ನೀಡಲಾಗಿದೆ.
ಐದು ವರ್ಷಗಳ ಹಿಂದೆ ಚೆನ್ನೈ ಮೃಗಾಲಯದಿಂದ 5 ರೆಟಿಕುಲೇಟೆಡ್ ಹೆಬ್ಬಾವುಗಳನ್ನು ಪಿಲಿಕುಳಕ್ಕೆ ತರಿಸಿಕೊಳ್ಳಲಾಗಿತ್ತು. ರೆಟಿಕುಲೇಟೆಡ್ ಹೆಬ್ಬಾವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಪ್ರದೇಶಗಳಲ್ಲಿ, ಅಂಡಮಾನ್ ನಿಕೊಬಾರ್ ದ್ವೀಪಗಳಲ್ಲಿ ಕಂಡು ಬರುತ್ತದೆ.
ಇವು ವಿಷರಹಿತ ಹಾವುಗಳಲ್ಲಿಯೇ ಅತ್ಯಂತ ಉದ್ದವಾಗಿರುತ್ತವೆ, ಈ ಹೆಬ್ಬಾವು ಸುಮಾರು 30 ಅಡಿ ಉದ್ದ ಬೆಳೆಯ ಬಲ್ಲವು ಹಾಗೂ ಆಕ್ರಮಣಕಾರಿ ಪ್ರವೃತ್ತಿ ಹೊಂದಿರುತ್ತದೆ.
ವಿಷಕಾರಿಯಾದ ಕನ್ನಡಿಹಾವು 16 ಮರಿಗಳನ್ನು ಇಟ್ಟಿದೆ. ಈಗಾಗಲೇ ಹಲವು ಜಾತಿಯ ಉರಗಗಳು, ಮಲಬಾರ್ ಗುಳಿಮಂಡಲ, ಗೂನು ಮೂಗಿನ ಗುಳಿಮಂಡಲ/ಸೊಪ್ಪು ಕನ್ನಡಿಹಾವು, ಕಟ್ಟುಹಾವು, ನಾಗರಹಾವು, ಇರ್ತಲೆಹಾವು, ಹುಲ್ಲುಹಾವು, ತೋಳಹಾವು, ಚೌಕಳಿ ನೀರು ಹಾವು, ಮಗ್ಗರ್ ಮೊಸಳೆಗಳ ಮರಿಗಳು ಪಿಲಿಕುಳದಲ್ಲಿ ಜನಿಸಿದ್ದು, ಕೆಲವನ್ನು ಪ್ರಾಣಿವಿನಿಮಯ ಯೋಜನೆಗೆ ಬಳಸಲಾಗಿದ್ದು, ಹೆಚ್ಚುವರಿ ನಿರುಪದ್ರವಿ ಪ್ರಾಣಿಗಳನ್ನು ಅರಣ್ಯ ಪ್ರದೇಶದಲ್ಲಿ ಬಿಡಲಾಗುತ್ತದೆ (ಸಂರಕ್ಷಣಾ ಯೋಜನೆ). ವನ್ಯಜೀವಿಗಳ ಸಂತನಾಭಿವೃದ್ದಿಗೆ ಪೂರಕವಾದ ನೈಜ್ಯ ವಾತಾವರಣವನ್ನು ಪಿಲಿಕುಳದಲ್ಲಿ ಕಲ್ಪಿಸಲಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರಾದ ಹೆಚ್. ಜಯಪ್ರಕಾಶ್ ಭಂಡಾರಿ ನಿರ್ದೇಶಕರು ತಿಳಿಸಿದ್ದಾರೆ.