
ಮಂಗಳೂರಿನ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಾರುವ ಮೀನುಗಳು
Friday, February 18, 2022
Edit
ಮಂಗಳೂರು: ಮಂಗಳೂರಿನ ಮೀನುಗಾರರ ಬಲೆಗೆ ಅಪರೂಪದ ಹಾರುವ ಮೀನುಗಳು 2 ಬಿದ್ದಿವೆ.
ಎರಡು ದಿನ ಹಿಂದೆ ದಕ್ಕೆಗೆ ಬಂದಿರುವ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನುಗಳೂ ಸಿಕ್ಕಿವೆ ಎಂದು ಮೀನುಗಾರ ಲೋಕೇಶ್ ಬೆಂಗ್ರೆ ತಿಳಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಫ್ಲೈಯಿಂಗ್ ಫಿಶ್ ಹಾಗೂ ತುಳುವಿನಲ್ಲಿ ಪಕ್ಕಿಮೀನು ಎಂದು ಇದನ್ನು ಕರೆಯುತ್ತಾರೆ.
ಹಾರುವ ಮೀನುಗಳು ಸಾಗರಗಳ ನೀರು ಬೆಚ್ಚಗಿರುವ ಪ್ರದೇಶಗಳಲ್ಲಿ (ಉಷ್ಣವಲಯದಲ್ಲಿ)ಹೆಚ್ಚಾಗಿ ಜೀವಿಸುತ್ತವೆ. ಈ ಮೀನುಗಳು ದೊಡ್ಡದಾದ ರೆಕ್ಕೆ ಹಾಗೂ ದೇಹದ ಎಲುಬುಗಳ ಭಿನ್ನ ರಚನೆಯ ಸಹಾಯದಿಂದ ಸಾಕಷ್ಟು ದೂರ ಗಾಳಿಯಲ್ಲಿ ತೇಲಬಲ್ಲವು. ಸಾಮಾನ್ಯವಾಗಿ 5೦ ಮೀಟರ್‌ಗಳವರೆಗೆ ಸರಾಗವಾಗಿ ಗಾಳಿಯಲ್ಲಿ ತೇಲಿಕೊಂಡು ಸಾಗುವ ಹಾರುವ ಮೀನುಗಳು ದೊಡ್ಡ ಅಲೆಗಳು ಉಬ್ಬುವಾಗ ಉಂಟಾಗುವ ಗಾಳಿಯ ಒತ್ತಡವನ್ನು ಬಳಸಿ 4೦೦ ಮೀಟರ್‌ಗಳವರೆಗೆ ಸುಲಭವಾಗಿ ತೇಲಿಕೊಂಡು ಸಾಗಬಲ್ಲವು.
ಈ ಮೀನುಗಳು ಸಾಮಾನ್ಯವಾಗಿ 15 ರಿಂದ 45 ಸೆಂ.ಮೀ.ವರೆಗೆ ಉದ್ದ ಬೆಳೆಯುತ್ತವೆ. ಇತರ ಮೀನುಗಳಿಗೆ ಹೋಲಿಸಿದರೆ ಹಾರುವ ಮೀನುಗಳು ಹೆಚ್ಚು ರುಚಿಕರವಾಗಿದ್ದು, ಇವುಗಳು ಬಲೆಗೆ ಬೀಳುವುದು ಅಪರೂಪ. ಆದರೆ, ಅದನ್ನೇ ಹಿಡಿಯುವ ಕ್ರಮ ಈ ಭಾಗದಲ್ಲಿ ಕಡಿಮೆ ಎನ್ನುತ್ತಾರೆ ಮೀನುಗಾರ ಲೋಕೇಶ್ ಬೆಂಗ್ರೆ.