ಅಕ್ಟೋಬರ್ 12 ರಂದು ಮಂಗಳೂರಿನಲ್ಲಿ ರಾಜ್ಯ ಮಟ್ಟದ 'ಸ್ವಿಮ್ ಗಾಲ 2025' ಈಜು ಸ್ಪರ್ಧೆ
Thursday, October 9, 2025
Edit
ಮಂಗಳೂರು: ರಾಜ್ಯದ ಪ್ರತಿಷ್ಠಿತ ಈಜು ಕ್ಲಬ್‌ಗಳಲ್ಲಿ ಒಂದಾದ ಮಂಗಳ ಸ್ವಿಮ್ಮಿಂಗ್ ಕ್ಲಬ್ ತನ್ನ 35 ವರ್ಷ ಪೂರೈಸಿದ ಹಿನ್ನಲೆಯಲ್ಲಿ ರಾಜ್ಯಮಟ್ಟದ ಮೆಡಲಿಸ್ಟ್ ಹಾಗೂ ನಾನ್ ಮೆಡಲಿಸ್ಟ್ 'ಸ್ವಿಮ್ ಗಾಲ 2025' ಈಜು ಸ್ಪರ್ಧೆಯನ್ನು ಮಂಗಳೂರಿನ ಕಾರ್ಪೋರೇಷನ್ ಈಜುಕೊಳದಲ್ಲಿ ಅಕ್ಟೋಬರ್ 12 ರಂದು, ಬೆಳಿಗ್ಗೆ 8.00ರಿಂದ - ರಾತ್ರಿ 8.00ರ ತನಕ ನಡೆಯಲಿದೆ ಎಂದು ಮಂಗಳೂರಿನ ಮಂಗಳಾ ಈಜು ಸಂಸ್ಥೆಯ ಅಧ್ಯಕ್ಷರಾದ ಪ್ರಮುಖ್ ರೈ ತಿಳಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ನಮ್ಮ ರಾಜ್ಯದ ಉದಯೋನ್ಮುಖ ಈಜು ಕ್ರೀಡಾಪಟುಗಳಿಗೆ ಹೆಚ್ಚಿನ ಸ್ಪರ್ಧಾ ಅನುಭವ ಹಾಗೂ ಈಜು ಕ್ರೀಡಾಪಟುಗಳ ಕ್ರೀಡಾ ಕೌಶಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತು ಕರಾವಳಿಗೆ ಅತ್ಯುತ್ತಮ ಕ್ರೀಡಾಪಟುಗಳನ್ನು ಪರಿಚಯಿಸುವ ಸದುದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರ, ರಾಜ್ಯ ಮಟ್ಟಗಳಲ್ಲಿ ಪದಕವನ್ನು ಮುಡಿಗೇರಿಸಿದ ಸುಮಾರು 350ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಹಾಗೂ 50ಕ್ಕೂ ಮಿಕ್ಕಿ ತೀರ್ಪುಗಾರರು ಭಾಗವಹಿಸುವ ನಿರೀಕ್ಷೆಯಿದೆ.
6 ವರ್ಷದಿಂದ ಮೇಲ್ಪಟ್ಟ ಮಕ್ಕಳಿಂದ ಹಿಡಿದು ಹಿರಿಯ (ಮಾಸ್ಟರ್ಸ್) ಈಜುಪಟುಗಳು ಸೇರಿದಂತೆ ವಿವಿಧ ವಯೋಮಾನದ 18 ವಿಭಾಗಗಳಲ್ಲಿ/ಗುಂಪುಗಳಲ್ಲಿ ಬಾಲಕರು, ಬಾಲಕಿಯರು , ಪುರುಷರು ಮತ್ತು ಮಹಿಳೆಯರ ತಂಡಗಳೂ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಈಜು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಲಕ್ಷ್ಮಣ್ ಕ್ರೀಡಾ ಅಕಾಡೆಮಿಯ ಜಂಟಿ ನಿರ್ದೇಶಕರಾದ ಹಾಗೂ ಖ್ಯಾತ ಓಲಿಂಪಿಯನ್ ಹಾಕಿ ಕ್ರೀಡಾಪಟು ಪದ್ಮಶ್ರೀ ಪುರಸ್ಕೃತ ಧನರಾಜ್ ಪಿಳ್ಳೆ ಇವರು ಪ್ರಥಮ ಬಾರಿಗೆ ಕ್ರೀಡಾಕೂಟವೊಂದನ್ನು ಉದ್ಘಾಟನೆ ಮಾಡಲು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ರೀಡಾ ಸಾಧಕರು, ರಾಜಕೀಯ ಮುಖಂಡರು, ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ಕ್ರೀಡಾಕೂಟದ ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭದಲ್ಲಿ ಅತಿಥಿಗಳಾಗಿ ರಾಜ್ಯದ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್, ಮಂಗಳೂರು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ. ಶಿವಾನಂದ ಗಟ್ಟಿ, ಕೋಶಾಧಿಕಾರಿ ಧನಂಜಯ್ ಶೆಟ್ಟಿ ಮುಖ್ಯ ಈಜು ತರಬೇತುದಾರರಾದ ಶಿಶಿರ್ ಎಸ್. ಗಟ್ಟಿ , ರಾಜೇಶ್ ಖಾರ್ವಿ ಉಪಸ್ಥಿತತರಿದ್ದರು .