ವಿಶ್ವ ಹಿಂದು ಪರಿಷತ್ ಹಾಗೂ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ದ.ಕ.ಜಿಲ್ಲೆ - ಬೃಹತ್ ಜನಾಗ್ರಹ ಸಭೆ
Tuesday, September 9, 2025
Edit
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ, ಭೂತಕೋಲ ಯಕ್ಷಗಾನ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಬಳಕೆ ರಾತ್ರಿ ಘಂಟೆ 10:30 ಬಳಿಕ ಮಾಡದಂತೆ ಜಿಲ್ಲಾಡಳಿತದ ನಿರ್ಬಂಧ ಬಗೆಹರಿಸಲು ಎರಡು ದಿನಗಳಲ್ಲಿ ದ.ಕ.ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಕಲಾವಿದರ ಜೊತೆ ಸಭೆ ನಡೆಸಿ, ಜಿಲ್ಲೆಯ ಧಾರ್ಮಿಕ ಚಟುವಟಿಕೆ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು. ಬಳಿಕ ಕಲಾವಿದರನ್ನು ಬೆಂಗಳೂರಿಗೆ ಕರೆದೊಯ್ದು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಲಾಗುವುದು. ನನ್ನ ಶಾಸಕ ಸ್ಥಾನ ಬೇಕಾದರೆ ಬಿಟ್ಟೇನು, ಆದರೆ, ಧಾರ್ಮಿಕ ನಂಬಿಕೆಯನ್ನು ಬಿಡುವುದಿಲ್ಲ ಎಂದು ಈ ಸಂಧರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಜಿಲ್ಲಾಡಳಿತ ಕಾನೂನಿನ ನೆಪದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಿಗೆ ತಡೆಯೊಡ್ಡುವ ಜಿಲ್ಲಾಡಳಿತದ ಕ್ರಮವನ್ನು ವಿರೋದಿಸಿ ವಿಶ್ವಹಿಂದು ಪರಿಷತ್ ಹಾಗೂ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ದ.ಕ. ಜಿಲ್ಲೆ ನೇತೃತ್ವದಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಕಾರ್ಯಕ್ರಮ ಸಂಘಟಕರ ಮತ್ತು ಸದಸ್ಯರ ಸಹಯೋಗದೊಂದಿಗೆ ನಗರದ ಕದ್ರಿ ಗೋರಕ್ಷನಾಥ ಮಂದಿರದಲ್ಲಿ ಮಂಗಳವಾರ ನಡೆದ ಬೃಹತ್ ಜನಾಗ್ರಹ ಸಭೆಯಲ್ಲಿ ಕಲಾವಿದರ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ನಿಲ್ಲಿಸುವ ಪೊಲೀಸರಿಗೆ ಡೆಸಿಬಲ್ ಅಂದರೆ ಏನು ಎಂಬುದೇ ಗೊತ್ತಿಲ್ಲ. ಏಕಾಏಕಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿ ಸೌಂಡ್‌ಬಾಕ್ಸ್ ವಶಪಡಿಸಿಕೊಳ್ಳುವುದು, ಕಾರ್ಯಕ್ರಮ ನಿಲ್ಲಿಸುವುದು ಸರಿಯಲ್ಲ ಎಂದರು.
ಬಳಿಕ ಮಾತನಾಡಿದ ಶಾಸಕ ಡಾ.ವೈ.ಭರತ್ ಶೆಟ್ಟಿ, ಜಿಲ್ಲಾಡಳಿತದ ನಿರ್ಧಾರ ಜಿಲ್ಲೆಯ ಸಾಂಸ್ಕೃತಿಕ, ಧಾರ್ಮಿಕ ವಲಯದ ಮೂರು ಸಾವಿರ ಜನರಿಗೆ ಸಮಸ್ಯೆ ಉಂಟುಮಾಡಿದೆ. ಕಾರ್ಯಕ್ರಮ ಆಯೋಜಕರು ಭಕ್ತಿ ಭಾವದ ಬದಲಿಗೆ ಆತಂಕದಲ್ಲಿ ಇರುವಂತಾಗಿದೆ. ಸರಕಾರದಿಂದ ಸ್ಪಂದನೆ ದೊರೆಯದಿದ್ದರೆ ರಸ್ತೆಗೆ ಇಳಿಯುತ್ತೇವೆ ಎಂದರು.
ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆ ಇಲ್ಲಿನ ಧಾರ್ಮಿಕ ಚಟುವಟಿಕೆಗಳ ಮೇಲೆ ನಿಂತಿದೆ. ಕಲಾವಿದರ ದುಖಃ ಇಡೀ ಜಿಲ್ಲೆಯ ಜನತೆಯ ದುಖಃವಾಗಿದೆ. ರಾಜ್ಯ ಸರಕಾರ ಕಲಾವಿದರ ಮನವಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಇಂತಹಾ ನಿಯಮ ಯಾಕೆ ? ನಮ್ಮ ಜಿಲ್ಲೆಯ ಮಕ್ಕಳನ್ನು ತಮ್ಮ ಹೆತ್ತವರು ಡಾಕ್ಟರ್, ಎಂಜಿನಿಯರ್ ಕಲಿಸುವ ಬದಲಿಗೆ ಐಎಎಸ್,ಐಪಿಎಸ್ ಅಧಿಕಾರಿಗಳನ್ನಾಗಿಸಬೇಕು. ಇಲ್ಲಿನ ಸಂಸ್ಕೃತಿಯ ಅರಿವು ಇಲ್ಲದ ಅಧಿಕಾರಿಗಳಿಂದ ಸಮಸ್ಯೆಯಾಗಿದೆ ಎಂದರು.
ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಜಿಲ್ಲೆಯಲ್ಲಿ ಯಕ್ಷಗಾನ, ನಾಟಕ, ದೈವಾರಾಧನೆ ನಡೆಯುವುದೇ ರಾತ್ರಿ ಹೊತ್ತಿನಲ್ಲಿ. ಧಾರ್ಮಿಕ ನಂಬಿಕೆಗಳಿಗೆ ಕಡಿವಾಣ ಹಾಕಿ, ಜನರ ನಂಬಿಕೆಗಳನ್ನು ಹಾಳು ಮಾಡಿದರೆ ಪರಿಣಾಮ ಉಂಟಾದೀತು ಎಂದು ಎಚ್ಚರಿಸಿದರು.
ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಕರಾವಳಿಗೆ ತುರ್ತು ಪರಿಸ್ಥಿತಿ ಬಂದಿದೆ ಎಂಬಂತೆ ಭಾಸವಾಗುತ್ತಿದೆ. ಧಾರ್ಮಿಕ ಭಾವನೆ, ನಂಬಿಕೆಗಳನ್ನು ದಿಕ್ಕರಿಸುವ ಬದಲಿಗೆ ಅದನ್ನು ಗೌರವಿಸಿ ನಿಭಾಯಿಸುವಾತ ಮಾತ್ರ ಸಮರ್ಥ ಅಧಿಕಾರಿ ಎನಿಸಿಕೊಳ್ಳುತ್ತಾನೆ. ಇಂದು ಯಕ್ಷಗಾನ, ನಾಟಕ ನಿಲ್ಲಿಸಿದವರು ನಾಳೆ ಭೂತ ಕೋಲ, ಜಾತ್ರೆಯನ್ನೂ ನಿಲ್ಲಿಸಬಹುದು. ಧಾರ್ಮಿಕ ಚೌಕಟ್ಟನ್ನು ತಪ್ಪಿಸುವ ಕೆಲಸವನ್ನು ದ.ಕ. ಜಿಲ್ಲಾಡಳಿತ ಮಾಡುತ್ತಿದೆ. ಜಿಲ್ಲೆಯಲ್ಲಿ ಮೊದಲಿನಂತೆಯೇ ಕಾರ್ಯಕ್ರಮ ನಡೆಸಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಹಿಂಪ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ.ಎಂ.ಬಿ. ಪುರಾಣಿಕ್ ಮಾತನಾಡಿ, ಕರಾವಳಿಯ ಅನ್ನದ ಬಟ್ಟಲಿಗೆ ಏಟು ಬಿದ್ದಿದೆ. ಜಿಲ್ಲಾಡಳಿತದಿಂದ ಉಂಟಾಗಿರುವ ತೊಂದರೆ ಪರಿಹರಿಸಲು ಎಲ್ಲರೂ ಒಟ್ಟಾಗಿ ಹೋರಾಡಬೇಕಿದೆ ಎಂದರು.
ವಿವಿಧ ಸಂಘಟನೆ, ಸಂಸ್ಥೆಗಳ ಪ್ರತಿನಿಧಿಗಳಾದ ಡಾ.ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್‌ಬೈಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಕಿಶೋರ್ ಶೆಟ್ಟಿ, ಭಾಸ್ಕರಚಂದ್ರ ಶೆಟ್ಟಿ, ಡಾ. ಆಶಾಜ್ಯೋತಿ ರೈ, ಧನರಾಜ್ ಶೆಟ್ಟಿ -ರಂಗಿಪೇಟೆ, ಪೊಳಲಿ ಗಿರಿಪ್ರಕಾಶ್ ತಂತ್ರಿ, ದಯಾನಂದ ಕತ್ತಲ್‌ಸಾರ್, ಮಧು ಬಂಗೇರ ಕಲ್ಲಡ್ಕ, ಕೃಷ್ಣಕುಮಾರ್ ಮಂಜೇಶ್ವರ, ಚಂದ್ರಶೇಖರ ಶೆಟ್ಟಿ, ಬಾಬು ಕೆ. ವಿಟ್ಲ, ಲಕ್ಷ್ಮಣ ಕುಮಾರ್ ಮಲ್ಲೂರು, ಅಶೋಕ್ ಶೆಟ್ಟಿ ಸರಪಾಡಿ, ಕಿರಣ್ ಕುಮಾರ್ ಜೋಗಿ, ಅಣ್ಣು ಪೂಜಾರಿ, ತುಷಾರ್ ಸುರೇಶ್, ಗೋಕುಲ್ ಕದ್ರಿ, ಜಗನ್ನಾಥ ಶೆಟ್ಟಿ ತಾಳಿಪ್ಪಾಡಿ ಉಪಸ್ಥಿತರಿದ್ದರು.
ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆ, ಯಕ್ಷಗಾನ, ನಾಟಕ, ದೈವಕೋಲ, ನೇಮ, ಭರತನಾಟ್ಯ ಸಹಿತ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಮತ್ತು ಸಾರ್ವಜನಿಕ ಕಾರ್ಯಕ್ರಮಕ್ಕೆ ಅನುಮತಿ ನೀಡುವ ತೊಂದರೆಗಳನ್ನು ನಿವಾರಿಸಿ ಈ ಹಿಂದಿನಂತೆಯೇ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಜಿಲ್ಲೆಯ ಶಾಸಕರ ಮೂಲಕ ಮನವಿ ಸಲ್ಲಿಸಲಾಯಿತು. ಜಿಲ್ಲೆಯಲ್ಲಿ ಮುಂದೆ ಇಂತಹಾ ಸಮಸ್ಯೆ ಉಂಟಾಗಬಾರದು. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬಗ್ಗೆಯೂ ಅಭಿಪ್ರಾಯ ಕೇಳಿಬಂತು.
ಕಲಾವಿದರು ದುಖಃ, ಬೇಸರ, ಆತಂಕದಲ್ಲಿ ಇದ್ದಾರೆ. ಕಲಾವಿದರ ಕಣ್ಣೀರು ಒಳ್ಳೆಯದಲ್ಲ. ಅಽಕಾರಿಗಳು ಹೃದಯವಂತರಾಗಬೇಕು - ಡಾ. ದೇವದಾಸ್ ಕಾಪಿಕಾಡ್
ತುಳುನಾಡಿನ ಸಾಂಸ್ಕೃತಿಕ ಲೋಕವನ್ನು ಕೊಲ್ಲಲು ಮಾಡಿದ ಪಿತೂರಿಯಿದು. ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗುವವರೆಗೂ ಹೋರಾಟ ಮುಂದುವರೆಯ ಬೇಕು - ವಿಜಯಕುಮಾರ್ ಕೊಡಿಯಾಲ್‌ಬೈಲ್
5೦ ಡೆಸಿಬಲ್‌ನಲ್ಲಿ ಕಾರ್ಯಕ್ರಮ ನಡೆಸುವುದು ಸಾಧ್ಯವಿಲ್ಲ. ಜನರಿಗೆ ಅಗತ್ಯ ಇರುವಷ್ಟು ಧ್ವನಿ ವ್ಯವಸ್ಥೆಗೆ ಅವಕಾಶ ನೀಡಬೇಕು - ಧನ್‌ರಾಜ್ ಶೆಟ್ಟಿ, ಧ್ವನಿವರ್ಧಕ ಮಾಲಕರ ಸಂಘದ ಅಧ್ಯಕ್ಷ
ತುಳುನಾಡಿನ ಆಚರಣೆಗೆ ಅಡ್ಡಿ ತಡೆಯಲು ತುಳು ರಾಜ್ಯ ಸ್ಥಾಪನೆ ಆಗಲಿ. ಕಲಾವಿದರ ಹೊಟ್ಟೆಗೆ ಹೊಡೆಯಬೇಡಿ. ಕಲಾವಿದರ ಮೇಲಿನ ದಬ್ಬಾಳಿಕೆ ಮುಂದುವರೆದರೆ ನೇಪಾಳದಲ್ಲಿ ಆದಂತೆ ಜನತೆ ಪ್ರತಿಭಟಿಸಬಹುದು - ದಯಾನಂದ ಕತ್ತಲ್‌ಸಾರ್










