ಕಟೀಲು ಕ್ಷೇತ್ರದ ಮೇಲೂ ಅಪಪ್ರಚಾರ ಮಾಡಿದ್ರು. ಸರಿಯಾದ ದಾಖಲೆ ಕೊಟ್ಟು ಅವರ ಬಾಯಿ ಮುಚ್ಚಿಸಿದೆವು – ಹರಿನಾರಾಯಣ ಅಸ್ರಣ್ಣ
Friday, August 22, 2025
Edit
ಮಂಗಳೂರು, ಆಗಸ್ಟ್ 22: ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ಅಪಪ್ರಚಾರದ ವಿರುದ್ದ ಮಂಗಳೂರಿನಲ್ಲಿ “ಧರ್ಮ ತೇಜೋ ಬಲಂ ಬಲಂ” ಧರ್ಮಜಾಗೃತಿ ಸಭೆ ನಡೆಯಿತು.
ಮೊದಲು ಶಿವ ಪಂಚಾಕ್ಷರಿ ಜಪವನ್ನು ಸಾಮೂಹಿಕವಾಗಿ ಜಪಿಸಲಾಯಿತು. ಭಜನೆ, ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಈ ವೇಳೆ ಮಾತನಾಡಿದ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ ಕಟೀಲು ದೇವಸ್ಥಾನದ ಮೇಲೂ ಇದೇ ರೀತಿಯ ಅಪಪ್ರಚಾರ ಮಾಡಿದ್ದರು. ಆದರೆ ನಾವು ಅವರ ವಿರುದ್ದ ಹೋರಾಟ ಮಾಡಿ ಗೆದ್ದೆವು ಎಂದಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಗುರಿಯಾಗಿಸಿ ನಡೆಯುತ್ತಿರುವ ಅಪಪ್ರಚಾರಗಳನ್ನು ಖಂಡಿಸಿ, ದಕ ಜಿಲ್ಲಾ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ ವತಿಯಿಂದ ಮಂಗಳೂರಿನ ಪುರಭವನದಲ್ಲಿ ನಡೆದ ‘ಧರ್ಮ ತೇಜೋ ಬಲಂ ಬಲಂ’ ಧರ್ಮಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಇದು ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆದ ಅಪಪ್ರಚಾರವಲ್ಲ, ಇಡೀ ಹಿಂದೂಗಳ ದೇವಸ್ಥಾನಗಳ ಮೇಲೆ ನಡೆದ ಅಪಚಾರವಾಗಿದೆ. ಈ ಹಿಂದೆ ಇದೇ ರೀತಿ ಕಟೀಲು ದೇವಸ್ಥಾನದ ಮೇಲೂ ದಾಳಿ ನಡೆದಿತ್ತು, ಅಪಪ್ರಚಾರ ಮಾಡಲಾಗಿತ್ತು. ನಾವು ಕೆಲವು ಸಮಯ ಅದರ ವಿರುದ್ಧ ಹೋರಾಟ ಮಾಡಿ ಗೆದ್ದೆವು. ಇಂದು ಧರ್ಮಸ್ಥಳ, ನಾಳೆ ಉಡುಪಿ, ಕಟೀಲು ದೇವಸ್ಥಾನಗಳ ಮೇಲೂ ಇವರು ದಾಳಿ ಮಾಡಬಹುದು. ಇದನ್ನು ಸಮಸ್ತ ಹಿಂದೂಗಳು ಒಟ್ಟು ಸೇರಿ ವಿರೋಧಿಸಬೇಕು ಎಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ ನುಡಿದರು.
ನಮ್ಮ ತುಳುನಾಡಿನ ಸಂಸ್ಕೃತಿಯಲ್ಲಿ ಕೆಟ್ಟ ಪದಗಳನ್ನು ಬಳಕೆ ಮಾಡುವ ಬದಲು, ಸಭ್ಯ ಪದಗಳಲ್ಲಿಯೇ ಬಯ್ಯುವುದನ್ನು ರೂಡಿಸಿಕೊಂಡಿದ್ದರು. ನಮ್ಮ ಸಂಸ್ಕೃತಿ, ಧರ್ಮ ಅದೇ ರೀತಿ ನಡೆದುಕೊಂಡು ಬಂದಿದೆ. ಆದರೆ ಇಂದು ನಾನು ಧರ್ಮಸ್ಥಳ ಬಗ್ಗೆ ನಡೆಯುತ್ತಿರುವ ಅಪಪ್ರಚಾರಗಳು ಕೇಳವುದನ್ನೇ ನಿಲ್ಲಿಸಿಬಿಟ್ಟೆ. ಯಾಕೆಂದರೆ ಅದನ್ನು ಕೇಳಲು ಸಹ ಸಾಧ್ಯವಿಲ್ಲ, ಇನ್ನೊಂದು ಸಲ ಕೇಳುವುದಿಲ್ಲ, ನೋಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಟ್ಟೆ. ಇದು ಕೇವಲ ಖಾವಂದರಿಗೆ ಮಾಡಿದ ಅಪಚಾರ ಎಂದು ಭಾವಿಸಬಾರದು. ಇದು ಧರ್ಮಸ್ಥಳ ಕ್ಷೇತ್ರಕ್ಕೆ ಮಾಡಿದ ಅಪಮಾನ. ಇದೇ ರೀತಿ ಕಟೀಲು ಕ್ಷೇತ್ರದ ಮೇಲೂ ನಡೆದಿತ್ತು. ಆದರೆ ಅದು ಸಿವಿಲ್ ಮ್ಯಾಟರ್ ಆಗಿದ್ದರಿಂದ ಸರಿಯಾದ ದಾಖಲೆ ಕೊಟ್ಟು ಅವರ ಬಾಯಿ ಮುಚ್ಚಿಸಿದೆವು. ಆದರೆ ಇಂದು ಕ್ರಿಮಿನಲ್ ವಿಷಯ ಸೇರಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಇಂದು ಧರ್ಮಸ್ಥಳ ನಾಳೆ ಕಟೀಲು ಉಡುಪಿಗೂ ಬರುತ್ತಾರೆ. ದೇವಸ್ಥಾನಗಳನ್ನು ನಾಶಪಡಿಸಬೇಕೆಂಬುವುದು ಅವರ ಗುರಿ ಎಂದರು.